Tuesday, June 5, 2012

ಸಂತೆ - ವ್ಯಾಪಾರ

"ಈರುಳ್ಳಿ - ಆಲೂಗೆಡ್ಡೆ 5, ಬೆಂಡೇಕಾಯಿ ಎಂಟು, ಬೀನ್ಸು ಕ್ಯಾರೆಟ್ ಹತ್ತು, ಹತ್ತು, ಹತ್ರೂಪಾಯಿ.. ಈರುಳ್ಳಿ - ಆಲೂಗೆಡ್ಡೆ... .."

(ಕ್ಯಾರೆಟ್ ಹತ್ ರೂಪಾಯಿಗೆ? ಇಷ್ಟು ಕಡಿಮೆ ಯಾವಾಗ್ ಆಯ್ತು? ಇರ್ಲಿ, ಒಂದೆರಡ್ ಕೇಜಿ ತಗಂಡ್ ಹೋದ್ರೆ ಹಲ್ವ ಮಾಡ್ಬೋದು!)

'ಎರಡು ಕೇಜಿ ಕ್ಯಾರೆಟ್ ಕೊಡಪ್ಪ.'

"ತಗೊಳ್ಳಿ ಸಾರ್, ಮತ್ತೇನು ಬೇಕು?"

'ಏನೂ ಬೇಡ. ಸಾಕು'

"ಎಂಭತ್ತು ರೂಪಾಯಿ ಕೊಡಿ."

'ಎಂಭತ್ತು? ಕ್ಯಾರೆಟ್ ಹತ್ತು ರೂಪಾಯಿ ಅಂತಿದ್ದೆ? ಅಲ್ಲಿಗೆ ಇಪ್ಪತ್ತೇ ತಾನೇ ಆಗೋದು?'

"ಕಾಲು ಕೇಜಿಗೆ ಹತ್ತು ರೂಪಾಯಿ!"

'......?!?!?!'

:-)

Wednesday, May 2, 2012

ಬಿದಿರಕ್ಕಿ

ಮೊನ್ನೆ ಎಲ್ಲೊ ಬಿದಿರು ಮೆಳೆಯ ಹತ್ತಿರ ಹೋಗಿದ್ದೆ. ಅಲ್ಲಿ ಕೆಳಗೆ ನೋಡಿದರೆ ಗೋಧಿ ಬಣ್ಣದ ಅಕ್ಕಿಯ ರೀತಿಯ ಕಾಳುಗಳು ತುಂಬಾ ಬಿದ್ದಿದ್ದವು. ಸರಿಯಾಗಿ ನೋಡಿದರೆ, ಅರೆ! ಹೌದು ಇದು "ಬಿದಿರಕ್ಕಿ". ನಾನು ಅದೇ ಮೊದಲು ಬಿದಿರಕ್ಕಿಯನ್ನು ನೋಡಿದ್ದು. ಆಗ ಅಜ್ಜ ಅದರ ಬಗ್ಗೆ ಹೇಳುತ್ತಿದ್ದುದು ನೆನಪಾಯಿತು. "ಬಿದಿರು ಅಕ್ಕಿ ಬಿಡುವುದು ತುಂಬಾ ಅಪರೂಪ. ಹಾಗೊಂದು ವೇಳೆ ಬಿದಿರಕ್ಕಿ ಬಿಟ್ಟರೆ ಆ ವರ್ಷ ಬರಗಾಲ ಬರಲಿದೆ ಎಂದರ್ಥ." ಈ ವರ್ಷ ಬಿದಿರಕ್ಕಿಯೂ ಬಿಟ್ಟಿದೆ, ಬರಗಾಲವೂ ಬಂದಿದೆ. ಎಂತಹಾ ಕಾಕತಾಳೀಯ / ಪ್ರಕೃತಿ ವಿಸ್ಮಯವಲ್ಲವೇ?

ಅವತ್ತು ಜೊತೆಗೆ ಕ್ಯಾಮೆರಾವನ್ನೂ ತೆಗೆದುಕೊಂಡು ಹೋಗಿದ್ದೆ. ಹಾಗಾಗಿ ಅಪರೂಪ(?)ದ "ಬಿದಿರಕ್ಕಿ"ಯ ಚಿತ್ರವನ್ನು ತೆಗೆದುಕೊಳ್ಳಲು ಸಾಧ್ಯವಾಯಿತು. ಅಂದ ಹಾಗೆ, ಇದರಿಂದ ಅನ್ನ ತಯಾರಿಸಿ ಊಟ ಕೂಡ ಮಾಡುತ್ತಾರಂತೆ. ರುಚಿಯಾಗಿಯೂ ಇರುತ್ತಂತೆ. ಆದರೆ ಬಹಳ ಉಷ್ಣ ಎಂದು ಕೇಳಿದ್ದೇನೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಯಾರ ಬಳಿಯಲ್ಲಾದರೂ ಇದ್ದರೆ ತಿಳಿಸಿ.

Friday, March 23, 2012

ಯುಗಾದಿಯ ಶುಭಾಶಯಗಳು

ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. "ನಂದನ" ಸಂವತ್ಸರವು ಎಲ್ಲರಿಗೂ ನಂದನವನ್ನುಂಟುಮಾಡಲಿ ಎಂದು ಹಾರೈಸುತ್ತೇನೆ.


- ಚಿತ್ರ © ಪ್ರಸನ್ನ.ಎಸ್.ಪಿ

Friday, December 2, 2011

ಕನಸು: ಒಂದು ಕಿರುಚಿತ್ರ

ದಯವಿಟ್ಟು ಎಲ್ಲರೂ ಈ ಕೆಳಗಿನ ಕಿರುಚಿತ್ರವನ್ನು ನೋಡಿ. ನಮ್ಮ ಸಮಾಜದಲ್ಲಿ ಭ್ರಷ್ಟಾಚಾರ ಇದೇ ರೀತಿ ಮುಂದುವರಿದರೆ ಮುಂದಿನ ಪೀಳಿಗೆಯ ಎಲ್ಲ ಮಕ್ಕಳಿಗೂ ಆದಿತ್ಯನದೇ ಪರಿಸ್ಥಿತಿ ಉಂಟಾಗುವುದರಲ್ಲಿ ಸಂದೇಹವೇ ಇಲ್ಲ. ಮತ್ತೊಮ್ಮೆ ಕೇಳಿಕೊಳ್ಳುತ್ತೇನೆ, ದಯವಿಟ್ಟು ಸ್ವಲ್ಪ ಬಿಡುವು ಮಾಡಿಕೊಂಡು ಈ ಕಿರುಚಿತ್ರವನ್ನು ನೋಡಿ. ಸುಮಾರು 16 ನಿಮಿಷ ಇದೆ ಅಷ್ಟೇ.

Monday, October 24, 2011

ಉಬುಂಟು 11.10ರಲ್ಲಿ ಕನ್ನಡ ಅಕ್ಷರ ಬರೆಯುವ ತೊಂದರೆ ಮತ್ತು ಪರಿಹಾರ

ಉಬುಂಟು 11.10ರಲ್ಲಿ ಕನ್ನಡ ಅಕ್ಷರಗಳನ್ನು ಬರೆಯಲು ಹೋದರೆ ಸ್ಪೇಸ್ ಇಲ್ಲೆಲ್ಲೋ ಬಂದು ವಾಕ್ಯಗಳು ಓದಲಾಗದಷ್ಟು ಹದಗೆಡುತ್ತದೆ. Unity desktopನಲ್ಲಿರುವ ಏನೋ ಒಂದು ತೊಂದರೆ ಇದಕ್ಕೆ ಕಾರಣ.

ಇದಕ್ಕೆ ಪರಿಹಾರವೂ ಇದೆ. GNOME Desktop ಹಾಕಿಕೊಂಡರೆ ನಂತರ ಕನ್ನಡವನ್ನು ಸರಿಯಾಗಿ ಟೈಪಿಸಲು ಆಗುತ್ತದೆ. GNOMEನ್ನು ಸ್ಥಾಪಿಸಿಕೊಳ್ಳಲು terminal ಓಪನ್ ಮಾಡಿ, ಈ ಕಮ್ಯಾಂಡನ್ನು ಓಡಿಸಿ,

sudo apt-get install gnome-panel

ನಂತರ ಲಾಗ್‌ಔಟ್ ಆಗಿ. ಮತ್ತೊಮ್ಮೆ ಲಾಗಿನ್ ಆಗುವಾಗ ಯೂಸರ್ ನೇಮಿನ ಪಕ್ಕ ಒಂದು ಚಕ್ರ ಕಾಣುತ್ತದೆ. ಅಲ್ಲಿ GNOME ಅಥವಾ GNOME Classic ಆರಿಸಿಕೊಳ್ಳಿ.

ಈಗ ಕನ್ನಡವನ್ನು ಟೈಪಿಸಿದರೆ ಸರಿಯಾಗಿ ಬರುತ್ತದೆ!

-ಪ್ರಸನ್ನ.ಎಸ್.ಪಿ