Tuesday, July 27, 2010

ಹುರುಳಿಸಾರು+ಸ್ವಲ್ಪ ಬೆಣ್ಣೆ+ಒಂದು ಹಪ್ಪಳ= ಅದ್ಭುತ ರುಚಿ!


ಹುರುಳಿ ಕಟ್ಟಿನ ಸಾರು ಮಲೆನಾಡಿಗರಿಗೆ ಮುಂಗಾರಿನ ಸಮಯದಲ್ಲಿ ಸಾಮಾನ್ಯ ಅಡುಗೆ. ದಿನವಿಡೀ ಗದ್ದೆಯನ್ನು ಹೂಟೆ (ಉಳುಮೆ) ಮಾಡುವ ಎತ್ತುಗಳಿಗೆ ಹುರುಳಿಯನ್ನು ಬೇಯಿಸಿ ಕೊಡುತ್ತಾರೆ. ಎತ್ತುಗಳಿಗೆ ಹೆಚ್ಚಿನ ಶಕ್ತಿ ಸಿಗಲಿ ಹಾಗೂ ಥಂಡಿಯ ವಾತಾವರಣದಿಂದ  ತೊಂದರೆಯಾಗದಿರಲಿ ಎಂಬುದೇ ಹುರುಳಿ ನೀಡುವ ಉದ್ದೇಶ. ಹಾಗೆ ಹುರುಳಿಯನ್ನು  ಬೇಯಿಸುವಾಗ ಸಿಗುವ ಕಂದು ರಸವೇ ಈ ಹುರುಳಿ ಕಟ್ಟು. ದಿನವಿಡೀ ತಣ್ಣನೆಯ ನೀರಿನಲ್ಲಿರುವ ಎತ್ತುಗಳ ಪಾದ ಮೆದುವಾಗಿರುತ್ತದೆ ಎಂಬ ಕಾರಣಕ್ಕಾಗಿ ಬಿಸಿಯಾಗಿರುವ ಹುರುಳಿಕಟ್ಟನ್ನು ಎತ್ತುಗಳ ಕಾಲಿಗೆ ಕೊಯ್ಯುತ್ತಾರೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಹುರುಳಿಕಟ್ಟು ಸಾರು ಮಾಡುವುದಕ್ಕೆ ಬಳಕೆಯಾಗುತ್ತದೆ. ಅನ್ನ, ಬಿಸಿ ಬಿಸಿ ಹುರುಳಿ ಸಾರು, ಒಂದು ಮುದ್ದೆ ಬೆಣ್ಣೆ, ಮೇಲೊಂದು ಹಲಸಿನಕಾಯಿ ಹಪ್ಪಳವಿದ್ದರೆ, ಆಹಾ! ಅದಕ್ಕಿಂತ ರುಚಿಕರ ಊಟ ಯಾವುದೇ ಸ್ಟಾರ್‍ ಹೋಟೆಲ್‌ಗಳಲ್ಲೂ ದೊರೆಯುವುದಿಲ್ಲ. ಹುರುಳಿ ಬೇಯಿಸುವ ಮನೆಗಳಲ್ಲಿ ಪ್ರತಿದಿನ ಹುರುಳಿಕಟ್ಟಿಗಾಗಿ ಐದಾರು ಕ್ಯಾರಿಯರ್‌ಗಳು ಕಾದಿರುತ್ತವೆ ಎಂದರೆ ಅದರ ಬೇಡಿಕೆ ಎಷ್ಟಿರಬಹುದು ನೀವೇ ಊಹಿಸಿ. ಮಲೆನಾಡಿಗರು ಮಳೆಗಾಲದಲ್ಲಿ ದೇಹವನ್ನು ಥಂಡಿಯಿಂದ ಕಾಪಾಡಿಕೊಳ್ಳಲು ಹುರುಳಿ ಸಾರನ್ನು ಪ್ರಮುಖವಾಗಿ ಬಳಸುತ್ತಾರೆ. ಅಸ್ತಮಾ ಇರುವವರು ಹುರುಳಿ ಸಾರು ಬಳಸಿದರೆ ಒಳ್ಳೆಯದು ಎನ್ನುತ್ತಾರೆ ಹಿರಿಯರು.

ಇಷ್ಟೆಲ್ಲಾ ಕೇಳಿದ ನಂತರ ನಿಮಗೂ ಹುರುಳಿ ಸಾರು ತಿನ್ನಬೇಕೆನ್ನುವ ಆಸೆ ಉಂಟಾಗಿದ್ದರೆ ಈಗಲೇ ಹುರುಳಿ ಬೇಯಿಸಲು ಶುರುಮಾಡಿ. ಸಾರು ಮಾಡುವುದನ್ನು ನಾನು ಹೇಳಿಕೊಡುತ್ತೇನೆ.

ಹುರುಳಿಕಟ್ಟು ತಯಾರಿಸುವ ವಿಧಾನ:
ಮೊದಲು ಕ್ಲೀನ್ ಮಾಡಿದ ಹುರುಳಿಯನ್ನು ನೀರು ಹಾಕಿ ಬೇಯಿಸಿಕೊಳ್ಳಿ. ಹುರುಳಿಯನ್ನು ಕುಕ್ಕರ್‌ನಲ್ಲಿ ಬೇಯಿಸಬಹುದು ಅಥವಾ ಹಾಗೆಯೇ ಬೇಯಿಸಬಹುದು. ಕುಕ್ಕರ್‌ನಲ್ಲಿ ಬೇಯಿಸುವುದಾದರೆ ಮೊದಲು ಹುರುಳಿಗೆ ನೀರು ಸೇರಿಸಿ ನಾಲ್ಕು ಕೂಗು ಕೂಗಿಸಬೇಕು. ತಣ್ಣಗಾದ ನಂತರ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಮತ್ತೊಂದು ನಾಲ್ಕು ಕೂಗು ಕೂಗಿಸಬೇಕು. ಹಾಗೆಯೇ ಬೇಯಿಸುವುದಾದರೆ ಉಪ್ಪು ಹಾಕುವುದು ಬೇಡ. ಆದರೆ ತುಂಬ ಹೊತ್ತು ಬೇಯಿಸಬೇಕು. ನಂತರ ಕಂಡಿ ಇರುವ ಪಾತ್ರೆ ಬಳಸಿ ಹುರುಳಿ ಹಾಗೂ ಕಟ್ಟನ್ನು ಬೇರ್ಪಡಿಸಬಹುದು. ಹುರುಳಿ ಕಟ್ಟು ಗಾಢ ಕಂದು ಬಣ್ಣವಿರುತ್ತದೆ.

ಹುರುಳಿ ಸಾರು ಮಾಡುವ ವಿಧಾನ:
ಮೊದಲು ಕೊತ್ತಂಬರಿ(ಧನಿಯಾ), ಜೀರಿಗೆ, ಸ್ವಲ್ಪ ಮೆಂತ್ಯ, ಇಂಗು, ಸಾಸಿವೆ, ಕರಿಬೇವು, ಮೆಣಸಿನಕಾಯಿ ಹುರಿದುಕೊಳ್ಳಿ. ಅದನ್ನು ತೆಂಗಿನತುರಿಯೊಂದಿಗೆ ಸೇರಿಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ.(ಬೆಳ್ಳುಳ್ಳಿ ತಿನ್ನುವವರು ಅದನ್ನೂ ಸೇರಿಸಬಹುದು). ನಂತರ ಹುರುಳಿಕಟ್ಟಿಗೆ ಉಪ್ಪು, ಬೆಲ್ಲ, ಹುಣಸೆ ಹಣ್ಣು, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಗೂ ರುಬ್ಬಿಕೊಂಡ ಮಿಶ್ರಣವನ್ನು(ಮಸಾಲೆಯನ್ನು) ಸೇರಿಸಿ ಚೆನ್ನಾಗಿ ಕುದಿಸಬೇಕು. ಕುದ್ದ ನಂತರ ಅದಕ್ಕೆ ತುಪ್ಪದಲ್ಲಿ ಸಾಸಿವೆಯೊಂದಿಗೆ ಒಗ್ಗರಣೆ ನೀಡಬೇಕು. ಇಷ್ಟು ಮಾಡಿದರೆ ಹುರುಳಿ ಸಾರು ರೆಡಿ. ನಂತರ ಅನ್ನಕ್ಕೆ ಈ ಸಾರು ಹಾಗೂ ಒಂದು ಸ್ವಲ್ಪ ಬೆಣ್ಣೆ ಸೇರಿಸಿ ಊಟ ಮಾಡಿದರೆ ಸೊಗಸಾಗಿರುತ್ತದೆ. ಜೊತೆಗೊಂದು ಹಲಸಿನಕಾಯಿ ಹಪ್ಪಳವಿದ್ದರೆ ಅದರ ಮಜಾನೇ ಬೇರೆ.

ಹುರುಳಿ ಪಲ್ಯ ಮಾಡುವ ವಿಧಾನ:
ಹುರುಳಿಕಟ್ಟು ತೆಗೆಯುವಾಗ ಬೇಯಿಸಿದ ಹುರುಳಿಯನ್ನು ಪಲ್ಯ ಮಾಡಲು ಬಳಸಬಹುದು. ಪಲ್ಯ ಮಾಡಲು ಮೊದಲು ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಬಾಣಲೆಯಲ್ಲಿ ಬಾಡಿಸಿಕೊಳ್ಳಬೇಕು. ಅದಕ್ಕೆ ಸಕ್ಕರೆ ಅಥವಾ ಬೆಲ್ಲ, ಉಪ್ಪು, ಹುಣಸೆಹಣ್ಣು, ಮೆಣಸಿನ ಪುಡಿ, ಕರಿಬೇವು ಸೇರಿಸಿ ಹುರಿಯಬೇಕು. ನಂತರ ಅದಕ್ಕೆ ಬೆಂದ ಹುರುಳಿಯನ್ನು ಸೇರಿಸಿ ಸ್ವಲ್ಪ ಹೊತ್ತು ಬೇಯಿಸಿದರೆ ಹುರುಳಿ ಪಲ್ಯ ತಯಾರು. ಇದನ್ನು ಚಪಾತಿ, ರೊಟ್ಟಿ, ದೋಸೆಯೊಂದಿಗೆ ಸೇರಿಸಿಕೊಂಡು ತಿನ್ನಬಹುದು. ಅನ್ನದೊಂದಿಗೂ ಸೇವಿಸಬಹುದು.

ನೀವೂ ಹುರುಳಿ ಸಾರು ತಯಾರಿಸಿ ಸವಿದು ನೋಡಿ. ಏನಾದರೂ ಅನುಮಾನಗಳಿದ್ದರೆ ಕೇಳಿ. ಹಾಗೆಯೇ ಸಾರು ಹೇಗಿತ್ತು ಎಂಬುದನ್ನು ನಮಗೂ ತಿಳಿಸಲು ಮರೆಯದಿರಿ. ಮುಂದಿನ ದಿನಗಳಲ್ಲಿ ಮಲೆನಾಡಿನ ಇನ್ನಷ್ಟು ಅಡುಗೆಗಳನ್ನು ಮಾಡುವುದು ಹೇಗೆಂದು ಹೇಳಿಕೊಡುತ್ತೇನೆ. ನೀವೂ ಅವುಗಳನ್ನು ತಯಾರಿಸಿಕೊಂಡು ಸವಿಯಬಹುದು.


ಧನ್ಯವಾದಗಳೊಂದಿಗೆ,
-ಪ್ರಸನ್ನ.ಶಂಕರಪುರ

0 Comments:

Post a Comment