Wednesday, August 4, 2010

ನಕಲಿ ಸಿಡಿ/ಡಿವಿಡಿಗಳ ಹಾವಳಿ


ನೀವು ಸಿಟಿ ಮಾರ್ಕೆಟ್‌ಗಳಲ್ಲಿ, ಬಸ್‌‌ಸ್ಟ್ಯಾಂಡ್‌‌ಗಳ ಬಳಿ, ಜನನಿಬಿಡ ರಸ್ತೆಗಳ ಪಕ್ಕ ತಳ್ಳುಗಾಡಿಗಳಲ್ಲಿ ಚಲನಚಿತ್ರಗಳ ಸಿಡಿ ಹಾಗೂ ಡಿವಿಡಿಗಳನ್ನು ಇಟ್ಟು ಮಾರುತ್ತಿರುವವರನ್ನು ನೋಡಿರಬಹುದು. ಹೋಗಿ ವಿಚಾರಿಸಿದರೆ ಒಂದು ಡಿವಿಡಿಗೆ ಸುಮಾರು ಮೂವತ್ತರಿಂದ ಮೂವತ್ತೈದು ರೂಪಾಯಿ ಹೇಳುತ್ತಾರೆ. ಸ್ವಲ್ಪ ಚೌಕಾಶಿ ಮಾಡಿದರೆ ಇಪ್ಪತೈದು ರೂಪಾಯಿಗೂ ಕೊಡಬಹುದು. ಇಷ್ಟು ಕಡಿಮೆ ದುಡ್ಡಿಗೆ ಡಿವಿಡಿ ಕೊಡುತ್ತಾರಲ್ಲ ಎಂದು ಆಶ್ಚರ್ಯವಾಗುತ್ತದೆಯಲ್ಲವೇ? ಅದರಲ್ಲೂ ಒಂದೇ ಡಿವಿಡಿಯಲ್ಲಿ ಹೊಚ್ಚ ಹೊಸ ನಾಲ್ಕೈದು ಚಲನಚಿತ್ರಗಳು ಇರುತ್ತದೆ. ಆದರೆ ನಿಜವಾದ ಸಂಗತಿ ಏನೆಂದರೆ ಅವು ಯಾವುವೂ ಅಸಲಿ ಡಿವಿಡಿಗಳಲ್ಲ! ಒಂದೋ ಅಸಲಿ ಸಿಡಿ/ಡಿವಿಡಿಯನ್ನು ಕಾಪಿ ಮಾಡಿರುತ್ತಾರೆ ಅಥವಾ ಆ ಚಲನಚಿತ್ರಗಳು ಥಿಯೇಟರ್‍ ಪ್ರಿಂಟ್ ಆಗಿರುತ್ತದೆ. ಹೊರಗಿನ ಕವರ್‍ ಮಾತ್ರ ಥೇಟ್ ಅಸಲಿಯಂತೆಯೇ ಇರುತ್ತದೆ. ಆದರೆ ಒಳಗಿನ ಡಿವಿಡಿ ಮಾತ್ರ ನಕಲಿ! ಅಲ್ಲದೇ ಈ ಡಿವಿಡಿಗಳ ದೃಶ್ಯದ ಗುಣಮಟ್ಟವೂ ಅಷ್ಟೊಂದು ಚೆನ್ನಾಗಿರುವುದಿಲ್ಲ. ಈ ಡಿವಿಡಿಗಳನ್ನು ಕೊಳ್ಳುವವರು ನೀಡುವ ಕಾರಣವೇನೆಂದರೆ, "ಥಿಯೇಟರ್‌‌ನಲ್ಲಿ 35 ರೂಪಾಯಿ ಕೊಟ್ಟರೆ ಒಂದು ಸಿನೆಮಾ ಮಾತ್ರ ನೋಡುವುದಕ್ಕಾಗುತ್ತದೆ. ಆದರೆ ಅದೇ ದುಡ್ಡಿನಲ್ಲಿ ಒಂದು ಡಿವಿಡಿ ಕೊಂಡರೆ ನಾಲ್ಕೈದು ಸಿನೆಮಾ ನೋಡಬಹುದು. ಜೊತೆಗೆ ಥಿಯೇಟರ್‌‌‌ನಲ್ಲಾದರೆ ಒಮ್ಮೆ ಮಾತ್ರ ಸಿನೆಮಾ ನೋಡಬಹುದು. ಆದರೆ ಒಂದು ಡಿವಿಡಿ ಕೊಂಡರೆ ಎಷ್ಟು ಬಾರಿ ಬೇಕಾದರೂ ಸಿನೆಮಾ ನೋಡಬಹುದು". ಆದರೆ ನಿಜವಾದ ಸಂಗತಿ ಏನೆಂದರೆ, ಈ ಡಿವಿಡಿಗಳನ್ನು ಒಂದೆರಡು ಬಾರಿ ಪ್ಲೇ ಮಾಡಿದರೆ ಮತ್ತೆ ಪ್ಲೇ ಆಗುವುದೇ ಇಲ್ಲ. ಏಕೆಂದರೆ ಅವುಗಳಲ್ಲಿ ಬಳಸುವ ಡಿವಿಡಿಯ ಗುಣಮಟ್ಟ ಅಷ್ಟು ಕಳಪೆಯಾಗಿರುತ್ತದೆ. ನನ್ನ ಸ್ನೇಹಿತನೊಬ್ಬ ಈ ರೀತಿಯ ಡಿವಿಡಿಯೊಂದನ್ನು ಪ್ಲೇ ಮಾಡಲು ಹೋದಾಗ, ಆ ಡಿವಿಡಿಯು ಡ್ರೈವ್‌ನೊಳಗೆ ಸಿಡಿದು ಡ್ರೈವ್ ಹಾಳಾಗಿ ಹೋಗಿತ್ತು. ಮತ್ತೆ ಆ ಡಿವಿಡಿ ಡ್ರೈವ್‌ನ್ನು ಸರಿಪಡಿಸಲು 250 ರೂಪಾಯಿ ಖರ್ಚು ಮಾಡಿದ.

ಈ ರೀತಿಯ ನಕಲಿ ಸಿಡಿ/ಡಿವಿಡಿಗಳನ್ನು ಕೊಳ್ಳುವುದರಿಂದ ಚಲನ ಚಿತ್ರೋದ್ಯಮಕ್ಕೆ ಸಾಕಷ್ಟು ನಷ್ಟ ಉಂಟಾಗುತ್ತದೆ. ಜನರು ಥಿಯೇಟರ್‌ನಲ್ಲಿ ಸಿನೆಮಾ ನೋಡದೆ ನಕಲಿ ಡಿವಿಡಿಗಳನ್ನು ಖರೀದಿಸಿ ಸಿನೆಮಾ ನೋಡಿದರೆ, ಸಿನೆಮಾ ನಿರ್ಮಿಸಿದವರಿಗೆ ಲಾಭವಾಗುವುದಾದರೂ ಹೇಗೆ? ಶುಕ್ರವಾರ ರಿಲೀಸ್ ಆದ ಸಿನೆಮಾದ ಡಿವಿಡಿಗಳು ಶನಿವಾರ ಸಂಜೆ ಅಥವಾ ಭಾನುವಾರದ ಹೊತ್ತಿಗೆಲ್ಲಾ ದೊರೆಯುತ್ತದೆ ಎಂದರೆ ನಕಲಿ ಡಿವಿಡಿಗಳನ್ನು ತಯಾರಿಸುವ ದಂಧೆ ಯಾವ ರೀತಿ ಬೆಳೆದಿರಬಹುದು ನೀವೇ ಊಹಿಸಿ. ಇಂತಹ ಡಿವಿಡಿಗಳನ್ನು ಖರೀದಿಸುವ ಜನರಿಂದಲೇ ನಕಲಿ ಡಿವಿಡಿಗಳ ಹಾವಳಿ ಹೆಚ್ಚಾಗುತ್ತದೆ. ಮುಂಚೆಯೆಲ್ಲಾ ಕ್ಲಾಸ್ ಬಂಕ್ ಮಾಡಿ ಥಿಯೇಟರ್‌‌ಗೆ ಹೋಗುತ್ತಿದ್ದ ಕಾಲೇಜು ಹುಡುಗರು ಈಗ, "ಎರಡು ದಿನ ಬಿಟ್ರೆ ಸಿಡಿ ಸಿಗುತ್ತೆ, ಆಮೇಲೆ ನೋಡಿದ್ರಾಯ್ತು ಬಿಡು" ಅನ್ನೋಕೆ ಶುರು ಮಾಡಿದ್ದಾರೆ! ಎಲ್ಲರೂ ಇದೇ ರೀತಿ ಯೋಚನೆ ಮಾಡೋಕೆ ಪ್ರಾರಂಭಿಸಿದರೆ ಚಿತ್ರೋದ್ಯಮ ನಷ್ಟದ ಹಾದಿ ಹಿಡಿಯುವುದು ಖಚಿತ.

ನಕಲಿ ಸಿಡಿ/ಡಿವಿಡಿ ಹಾವಳಿಯನ್ನು ನಿಯಂತ್ರಿಸುವ ಕೆಲಸ ನಮ್ಮಿಂದಲೇ ಆಗಬೇಕು. ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಇಂತಹ ಡಿವಿಡಿಗಳನ್ನು ಕೊಳ್ಳಬಾರದು. ಹೊಸ ಚಲನಚಿತ್ರಗಳನ್ನು ಥಿಯೇಟರ್‌ಗಳಲ್ಲಿಯೇ ನೋಡಬೇಕು. ಡಿವಿಡಿಗಳನ್ನು ಕೊಳ್ಳುವುದಿದ್ದರೆ ಅಸಲಿ ಡಿವಿಡಿಗಳನ್ನೇ ಕೊಳ್ಳಬೇಕು. ಪೈರಸಿಯನ್ನು ತಡೆಗಟ್ಟುವ ಉದ್ದೇಶದಿಂದ ಮೋಸರ್‌‌‌ಬೇರ್‍ ಮುಂತಾದ ಕಂಪೆನಿಗಳು ಕಡಿಮೆ ಬೆಲೆಗೆ ಅಸಲಿ ಸಿಡಿ/ಡಿವಿಡಿಗಳನ್ನು ಕೊಡುತ್ತವೆ. ಅಂತಹ ಒರಿಜಿನಲ್ ಸಿಡಿ/ಡಿವಿಡಿಗಳನ್ನು ಖರೀದಿಸಬಹುದು. ನಕಲಿ ಸಿಡಿ/ಡಿವಿಡಿಗಳನ್ನು ತಯಾರಿಸುವವರ ಬಗ್ಗೆ ಮಾಹಿತಿ ಗೊತ್ತಿದ್ದರೆ, ಸಾಧ್ಯವಾದರೆ ಪೊಲೀಸರಿಗೆ ಸುಳಿವು ನೀಡಬಹುದು. ಈ ಕ್ರಮಗಳನ್ನು ಅನುಸರಿಸಿದರೆ ತಾನಾಗಿಯೇ ನಕಲಿ ಡಿವಿಡಿ ಎಂಬ ಪಿಡುಗು ಕಡಿಮೆಯಾಗುತ್ತದೆ, ಹಾಗೆಯೇ ಚಿತ್ರ ನಿರ್ಮಾಪಕರಿಗೂ ನಷ್ಟವಾಗುವುದು ತಪ್ಪುತ್ತದೆ.


0 Comments:

Post a Comment