Wednesday, September 7, 2011

ಮನುಷ್ಯ V/s. ಸಸ್ಯ

ನಾವು ಮನುಷ್ಯರು ಬದುಕುವುದಕ್ಕೆ ಎಷ್ಟೊಂದು ಕಷ್ಟಪಡುತ್ತೇವೆ ಅಲ್ಲವೇ? ಜಾಗ ಸರಿಹೋದರೆ ಊಟ ಸರಿಯಾಗುವುದಿಲ್ಲ, ಊಟ ಸರಿಹೋದರೆ ಹವಾಮಾನ ಸರಿಹೋಗುವುದಿಲ್ಲ. ನಾವು ಬದುಕಿಗೆ ಹೊಂದಿಕೊಳ್ಳುವುದಕ್ಕೆ ಪ್ರಯತ್ನಿಸುವುದರಲ್ಲಿಯೇ ಜೀವನದ ಸಾಕಷ್ಟು ಸಮಯವನ್ನು ಕಳೆಯುತ್ತೇವೆ. ಆದರೆ ಸಸ್ಯಗಳು ಹಾಗಲ್ಲ. ಅವು ಇರುವುದೇ ಒಂದೇ ಜಾಗದಲ್ಲಿಯಾದರೂ ಅದಕ್ಕೇ ಎಷ್ಟು ಸರಿಯಾಗಿ ಹೊಂದಿಕೊಳ್ಳುತ್ತವೆ ನೋಡಿ. ನಮಗೆ ಈ ಜಾಗ ಆಗುವುದಿಲ್ಲ, ನೆಲ ತಗ್ಗಾಗಿದೆ, ಬಿಸಿಲು ಜಾಸ್ತಿ ಬೀಳುತ್ತದೆ, ನೀರು ಸರಿಯಾಗಿಲ್ಲ ಎಂದು ದೂರುವುದೇ ಇಲ್ಲ. ಒಂದು ಮಳೆ ಬಿದ್ದರೆ ಸಾಕು ಎಲ್ಲೆಡೆ ಎದ್ದುನಿಲ್ಲುತ್ತವೆ. ಅವು ಹಾಗಿರುವುದರಿಂದಲೇ ನಾವು ಉಸಿರಾಡಲು ಆಗುತ್ತಿರುವುದು ಅಲ್ವಾ? ಇದೆಲ್ಲಾ ಯಾಕೆ ಹೇಳುತ್ತಿದ್ದೇನೆ ಅಂದ್ರೆ, ಮೊನ್ನೆ ಹಬ್ಬಕ್ಕೆಂದು ಊರಿಗೆ ಹೋದಾಗ ಇದೇ ರೀತಿಯ ಕೆಲವು ಸಸ್ಯಗಳನ್ನು ಗಮನಿಸಿದೆ. ಕೆಳವು ಗೋಡೆಗಳ ಮೇಲೆ ಬೆಳೆದುಕೊಂಡಿದ್ದರೆ, ಇನ್ನು ಕೆಲವು ಹೆಂಚು, ದೋಣಿ (ನೀರು ಹೋಗಲು ಹೆಂಚಿನ ತುದಿಗೆ ಹಾಕಿರುವ ಅರ್ಧಚಂದ್ರಾಕಾರದ ಉದ್ದವಾದ ಪೈಪ್/ ದಬ್ಬೆಯ ತುಂಡು) ಇತ್ಯಾದಿ ಜಾಗಗಳಲ್ಲಿ ಬೆಳೆದುಕೊಂಡಿದ್ದವು. ಅದನ್ನು ನೋಡಿದ ಮೇಲೆ ನಮಗೆ ಬದುಕುವುದಕ್ಕೆ ಸಸ್ಯಗಳಿಗಿಂತ ಕಷ್ಟವೇ ಎಂದು ಕೇಳಿಕೊಳ್ಳುವಂತಾಯಿತು..






-ಚಿತ್ರಗಳು: ಪ್ರಸನ್ನ.ಎಸ್.ಪಿ

Saturday, September 3, 2011

ಚಾಮರಾಜನಗರ, ಅಧಿಕಾರ ಮತ್ತು ಮೂಢನಂಬಿಕೆ

ಚಾಮರಾಜನಗರಕ್ಕೆ ಬರುವ ರಾಜ್ಯದ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ (ಮೂಢ)ನಂಬಿಕೆಯಿದೆ. ಮುಖ್ಯಮಂತ್ರಿಗಳಿರಲಿ, ಮಂತ್ರಿಗಳು ಹಾಗೂ ಅಧಿಕಾರಿಗಳೂ ಸಹ ಅಲ್ಲಿಗೆ ಕಾಲಿಡಲು ಹೆದರುತ್ತಾರೆ. ಈಗ ಅಲ್ಲಿಗೆ ತಗುಲಿರುವ ಶಾಪ(?)ವನ್ನು ಕಳೆಯಲು ಅಷ್ಟಮಂಗಳ ಪ್ರಶ್ನೆ ನಡೆಸಿ, ತೊಂದರೆಗಳನ್ನು ಪರಿಹರಿಸಿ ನಂತರ ಸದಾನಂದಗೌಡರನ್ನು ಚಾಮರಾಜನಗರಕ್ಕೆ ಕರೆಸುವ ಯೋಜನೆಗಳು ನಡೆಯುತ್ತಿದೆ. ಇದರ ಜೊತೆಗೇ ಕೇಳಿ ಬರುತ್ತಿರುವ ಇನ್ನೊಂದು ಸುದ್ದಿಯೆಂದರೆ ಶ್ರೀರಾಮುಲು ಅವರಿಂದ ಹೊಸ ಪಕ್ಷ ರಚನೆ. ಹೌದು, ಸುದ್ದಿಮೂಲಗಳ ಪ್ರಕಾರ ಶ್ರೀರಾಮುಲು ಅವರು ನಾಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಬಹುತೇಕ ಖಚಿತ. ಅಲ್ಲದೇ ಸಧ್ಯದಲ್ಲಿಯೇ ಹೊಸ ಪಕ್ಷವನ್ನೂ ಕಟ್ಟಲಿದ್ದಾರಂತೆ. ಅದು ನಿಜವೇ ಆದರೆ ಶ್ರೀರಾಮುಲು ಬೆಂಬಲಿಗ ಶಾಸಕರೂ ಕೂಡ ಬಿಜೆಪಿ ತೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾದಲ್ಲಿ ರಾಜ್ಯದಲ್ಲಿ ಅಸ್ಥಿತ್ವದಲ್ಲಿರುವ ಡಿ.ವಿ.ಸದಾನಂದಗೌಡ ನೇತೃತ್ವದ ಬಿಜೆಪಿ ಸರ್ಕಾರ ಬಹುಮತ ಕಳೆದುಕೊಳ್ಳಲಿದೆ.

ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ನನ್ನದೊಂದು ವಿನಂತಿ, ನಿಮ್ಮ ಚಾಮರಾಜನಗರ ಭೇಟಿಯನ್ನು ಸ್ವಲ್ಪ ದಿನದ ಮಟ್ಟಿಗೆ ಮುಂದೂಡಿ. ಒಂದು ವೇಳೆ ನೀವು ಚಾಮರಾಜನಗರಕ್ಕೆ ಭೇಟಿ ನೀಡಿದ ಸಮಯದಲ್ಲಿಯೇ ಶ್ರೀರಾಮುಲು ಮತ್ತವರ ಬೆಂಬಲಿಗ ಶಾಸಕರಿಂದ ನಿಮ್ಮ ಸರ್ಕಾರ ಬಹುಮತ ಕಳೆದುಕೊಂಡರೆ ಆಗ ಚಾಮರಾಜನಗರದ ಬಗ್ಗೆ ಇರುವ ಮೂಢನಂಬಿಕೆ ಮತ್ತೊಮ್ಮೆ ನಿಜವಾಗುತ್ತದೆ. ಹಾಗಾಗದಿರಲಿ ಎನ್ನುವುದು ಎಲ್ಲರ ಆಶಯ.